ಮುಂಡಾಲ ಸಮುದಾಯದ ಇತಿಹಾಸ
ಮುಂದಾಳು-ಮುಂಡಾಳ (ಮುಂಡಾಲ) ಜನಾಂಗ
ಶಿವಾoಶ ಸಂಭೂತನಾದ ಶ್ರೀ ಬಬ್ಬುಸ್ವಾಮಿಯಂತಹ ದೈವಶ್ರೇಷ್ಠನನ್ನು ಕುಲದೇವರಾಗಿ ಆರಾಧಿಸುತ್ತಿರುವ ‘ಮುಂಡಾಳ’ ಜನಾಂಗವು ಐತಿಹಾಸಿಕ, ಜನಪದ, ಸಾಂಸ್ಕೃತಿಕ ಹಿನ್ನಲೆಯನ್ನು ಹೊಂದಿರುವ ತುಳುನಾಡಿನ ಒಂದು ಶ್ರೇಷ್ಠ ಜನಾಂಗವಾಗಿದೆ. ಈ ಜನಾಂಗವು ಭೂಮಿ ಸೃಷ್ಟಿಯಾದಾಗಲೇ ಸೃಷ್ಟಿಯಾದ ಜನಾಂಗ ಎಂಬ ಜನಪದ ಹಿನ್ನಲೆಯೂ ಇದೆ. ಈ ಜನಾಂಗದವರು ಹುಟ್ಟಿನಿಂದಲೇ ಮೂಲತಃ ಜನಿವಾರ ಹಾಗೂ ‘ಇಷ್ಟಲಿಂಗ’, ಪಾಡ್ದನದಲ್ಲಿ ಇರುವಂತೆ ‘ಬೇಡಾ ಬೇಡಿ ಲಿಂಗ’ಧಾರಿಗಳೂ, ಭೂಮಿ ಸೃಷ್ಟಿಯಾದಾಗ ಸೃಷ್ಟಿಯಾದ ಶ್ರೀ ಕಂಬೆರ್ಲು ದೇವರ ಆರಾಧಕರೂ ಆಗಿದ್ದಾರೆ. ಮುಂಡಾಳ ಜನಾಂಗದವರ ಪ್ರಧಾನ ಆರಾಧ್ಯ ದೇವರಾದ ಶ್ರೀ ಸತ್ಯ ಕಂಬೆರ್ಲು ದೇವರು ಅವತರಿಸಿದ ಜನಪದ ಕಥಾನಕ, ಮೂಲ ಪಾಡ್ದನದಿಂದ ತಿಳಿದುಬರುವಂತೆ, ಭೂಮಿ ಸೃಷ್ಟಿಯಾದಾಗ ಶ್ರೀಮನ್ನಾರಾಯಣ ದೇವರ ಮೈಯ ಬಲಭಾಗದ ಬೆವರ ಹನಿಯೊಂದು ಮಹಾಶೇಷನ ಹೆಡೆಯಲ್ಲಿದ್ದ ಮಾಣಿಕ್ಯದ ಕಲ್ಲಿನ ಮೇಲೆ ಬೀಳುತ್ತದೆ. ಆಗ ಆ ಕಲ್ಲಿನಿಂದ ಉದ್ಭವಿಸಿದ ದೇವರೇ ಈ ಸತ್ಯದ ಕಂಬೆರ್ಲು. ಆನಂತರ ಆ ಮಾಣಿಕ್ಯದ ಕಲ್ಲಿನಿಂದ ಹುಟ್ಟು ಬಂದ ಜನಾಂಗವೇ ‘ಮುಂದಾಳ’ ಅಥವಾ ಮುಂಡಾಳ ಜನಾಂಗ. ಭೂಮಿ ಸೃಷ್ಟಿಯಾದ ಮೂಲದಲ್ಲಿಯೇ, ಪ್ರಥಮದಲ್ಲಿಯೇ ಸೃಷ್ಟಿಯಾದ ಜನಾಂಗವಾದುದರಿoದ ‘ಮುಂದಾಳು’ ಎಂದು ಕರೆಯಲ್ಲಟ್ಟು ನಂತರ ‘ದಾ’ ಪ್ರತ್ಯಯವು ‘ಡಾ’ ಆಗಿ ಪರಿವರ್ತನೆಗೊಂಡು ‘ಮುಂಡಾಳ’ ವಾಯಿತು.
ಅರಸರ ಆಳ್ವಿಕೆಯ ಕಾಲದಲ್ಲಿ ಮುಂದಾಳ/ಮುಂಡಾಳರು
ಮುoಡಾಳ ಜನಾಂಗದವರಿಗೆ ಅರಸರ ಆಳ್ವಿಕೆಯ ಕಾಲದಲ್ಲಿ ಉನ್ನತವಾದ ಸ್ಥಾನಮಾನಗಳು ದೊರೆಯುತ್ತಿತ್ತು. ಆ ಕಾಲದಲ್ಲಿ ಅರಸರ ಮಂತ್ರಿಮoಡಲದಲ್ಲಿ ಉನ್ನತವಾದ ಅಧಿಕಾರವನ್ನು ಹೊಂದಿರುವವರು ಮಾತ್ರ ತಲೆಗೆ ಮುಂಡಾಸು (ತರೆತ್ರ) ಧರಿಸುತ್ತಿದ್ದರು. ಆಕಾಲದಲ್ಲಿಯೂ ಮುಂಡಾಳ ಜನಾಂಗದ ಘನತೆ ಹಾಗೂ ವಸ್ತç ವಿನ್ಯಾಸದಂತೆ ಪ್ರತಿಯೊಬ್ಬ ಮುಂಡಾಳದ ಮಾಣಿಯೂ ಕಡ್ಡಾಯವಾಗಿ ತರೆತ್ರ ಅಥವಾ ಮುಂಡಾಸನ್ನು (ರುಮಾಲು) ಧರಿಸುತ್ತಿದ್ದರು. ಆದ್ದರಿಂದ ಮುಂಡಾಳದ ಮಾಣಿಗಳಿಗೆ ‘ತರೆತ್ರ’ದವರು ಎಂಬ ಅನ್ವರ್ಥ ನಾಮವಿದೆ. ಈ ಜನಾಂಗದವರು ಯಾವುದೇ ಧಾರ್ಮಿಕ ಹಾಗೂ ಕೃಷಿ ಕಾರ್ಯಗಳನ್ನು ಮಾಡುವಾಗಲೂ ಇಂದಿಗೂ ಕಡ್ಡಾಯವಾಗಿ ಮುಂಡಾಸನ್ನು ಧರಿಸುತ್ತಾರೆ. ಅರಸರ ಆಳ್ವಿಕೆಯ ಕಾಲದಲ್ಲಿ ಈ ಜನಾಂಗದವರು ಕೃಷಿ ಕಾರ್ಯಗಳ ಮುಂದಾಳತ್ವವನ್ನು ವಹಿಸಿಕೊಂಡು ಶ್ರಮವಹಸಿ, ನಿಷ್ಠೆಯಿಂದ ದುಡಿಯುತ್ತಿದ್ದರು. ಸತ್ಯವಂತರೂ, ಸ್ವಾಮಿ ಭಕ್ತರೂ ಆಗಿರುವ ಇವರು ಊರಿನ ಅರಸರ ಮೇಲೆ, ಹಾಗೂ ತಮ್ಮ ಜನ್ಮ ಭೂಮಿಯ ಮೇಲೆ ಅಪಾರವಾದ ಗೌರವವನ್ನು ಹೊಂದಿದ್ದರು. ತೀಕ್ಷ÷್ಣವಾದ ಬುದ್ದಿವಂತಿಕೆಯನ್ನು ಹೊಂದಿದ್ದ ಇವರು, ಅರಸರ ಕಷ್ಟಕಾಲದ ಸಂದರ್ಭದಲ್ಲಿ ಶತ್ರುಸೈನ್ಯದ ದಾಳಿಯ ಸಂದರ್ಭದಲ್ಲಿ ತಮ್ಮ ಹಣೆ (ಮುಂಡ)ಯಲ್ಲಿರುವ ಬುದ್ದಿಶಕ್ತಿಯನ್ನು ಉಪಯೋಗಿಸಿ ಅರಸರಿಗೆ ಅತ್ಯಮೂಲ್ಯವಾದ ಸಲಹೆ ಸೂಚನೆ, ಮಾರ್ಗದರ್ಶನವನ್ನು ನೀಡುವ ಮೂಲಕ ಅರಸರ ಕಷ್ಟದಲ್ಲಿ ಭಾಗಿಯಾಗುತ್ತಿದ್ದರು. ಮುಂಡದಿoದ ಅಂದರೆ ಹಣೆಯಲ್ಲಿರುವ ಬುದ್ದಿವಂತಿಕೆಯಿoದ ಆಳುತ್ತಿದ್ದರಿಂದಲೂ ಇವರು ‘ಮುಂಡಾಳ’ರೆoದು ಕರೆಯಲ್ಪಟ್ಟಿದ್ದಾರೆ. ಇದಕ್ಕೆ ಮೂಲ ದಾಖಲೆಯಾಗಿ ಗುರುಪುರ-ಕೈಕಂಬ ಸಮೀಪದ ಗೋಳಿದಡಿ ಗುತ್ತಿನಲ್ಲಿ ತಾಳೆ ಓಲೆಗರಿಯಲ್ಲಿ ಬರೆದಿಟ್ಟ ಶಾಸನ ಇಂದಿಗೂ ಲಭ್ಯವಿದೆ. ಶ್ರೀ ಬಬ್ಬುಸ್ವಾಮಿಯು ಗೋಳಿದಡಿ ಗುತ್ತಿಗೆ ಬಂದoತಹ ದಾಖಲೆಯೂ ಇದೆ. ಮುಂಡಾಳ ಜನಾಂಗದ ಒಂದು ಪಂಗಡದವರು ಅರಮನೆಯ ಕೂಸುಗಳನ್ನು ಆಡಿಸುವ, ಆರೈಕೆ ಮಾಡುವ ಕೆಲಸವನ್ನು ಮಾಡುತ್ತಿದ್ದರು. ಕಾಲಕ್ರಮೇಣ ಅವರು ಕೂಸಾಳರೆಂದು ಕರೆಯಲ್ಪಡುತ್ತಾರೆ. ಈ ಜನಾಂಗದ ಇನ್ನೊಂದು ಪಂಗಡ ಉಪ್ಪು ತಯಾರಿಸುವ ಕಾಯಕಕ್ಕೆ ತೆರಳುತ್ತಾರೆ ಕಾಲಕ್ರಮೇಣ ಇವರು ‘ಉಪ್ಪಾರ’ರೆಂದು ಕರೆಯಲ್ಪಡುತ್ತಾರೆ.
೧೨ನೇ ಶತಮಾನದಲ್ಲಿ ಅಂದರೆ ಸುಮಾರು ೮೫೦ ವರ್ಷಗಳ ಹಿಂದೆ ಶಿವಶರಣರಾದ ಬಸವಣ್ಣನವರು ‘ಕಲ್ಯಾಣ ಕ್ರಾಂತಿ’ಯನ್ನು ಆರಂಭಿಸಿದರು. ಆ ಮೂಲಕ ‘ಇಷ್ಠಲಿಂಗ’ ಧಾರಣೆ ಹಾಗೂ ಲಿಂಗಾಯಿತರ ಮಠ ಮಂದಿರಗಳು ಅಲ್ಲಲ್ಲಿ ತಲೆ ಎತ್ತತೊಡಗಿತು. ಆ ಸಂದರ್ಭದಲ್ಲಿ ಸ್ಥಾಪನೆಯಾದ ಮಠಗಳಲ್ಲಿ ಐತಿಹಾಸಿಕ, ಪೌರಾಣಿಕ ಹಿನ್ನಲೆಯನ್ನು ಹೊಂದಿರುವ ಶ್ರೀ ಭಾರಂಗಿ ಕೂಡ್ಲಿ ಮಹಾಸಂಸ್ಥಾನ ಮಠವೂ ಒಂದು. ಹುಟ್ಟಿನಿಂದಲೇ ಮೂಲತಃ ‘ಲಿಂಗ’ ಧಾರಿಗಳಾಗಿದ್ದ ಮುಂಡಾಲ, ಉಪ್ಪಾರ ಹಾಗೂ ಕೂಸಾಳರು ಶ್ರೀ ಭಾರಂಗಿ ಕೂಡ್ಲಿ ಮಹಾಸಂಸ್ಥಾನವನ್ನು ತಮ್ಮ ಗುರುಮಠವನ್ನಾಗಿ ಸ್ವೀಕರಿಸುತ್ತಾರೆ. ಆಗ ಕೆಳದಿಯ ಅರಸರು ಆಳ್ವಿಕೆ ನಡೆಸುತ್ತಿದ್ದರು. ಆಕಾಲದಲ್ಲಿ ಬೇರೆ ಬೇರೆ ದೇಶಗಳ ಅರಸರ ನಿರಂತರ ದಾಳಿ ಉಪಟಳಗಳು ನಡೆಯುತ್ತಿತ್ತು. ಇದರಿಂದ ಕೆಳದಿ ಅರಸರ ಆಳ್ವಿಕೆಯು ಪತನಗೊಳ್ಳಲು ಈ ಲಿಂಗಾಯಿತರು ಇಕ್ಕೇರಿ ಅರಸರ ಆಶ್ರಯವನ್ನು ಪಡೆದರು. ಇಕ್ಕೇರಿ ಅರಸರ ಆಳ್ವಿಕೆಯೂ ಪತನಗೊಳ್ಳಲು ಈ ಲಿಂಗಾಯಿತರು ‘ನಗರ’ ರಾಜ್ಯದ ಅರಸರ ಆಶ್ರಯವನ್ನು ಪಡೆಯುತ್ತಾರೆ. ನಗರ ರಾಜ್ಯದ ಅರಸರ ಆಳ್ವಿಕೆಯೂ ಪತನಗೊಂಡಾಗ, ತಮ್ಮನ್ನು ರಕ್ಷಿಸುವ ಅರಸರ ಆಶ್ರಯವಿಲ್ಲದೆ ಕಂಗೆಟ್ಟ ಈ ಕೋಟಿ ಸಂಖ್ಯೆಯ (ಮುಂಡಾಳ, ಉಪ್ಪಾರ, ಕೂಸಾಳ ಜನಾಂಗದ) ಲಿಂಗಾಯತರು ದಿಕ್ಕುದೆಸೆ ಇಲ್ಲದೆ, ಧರ್ಮದ ಪರಿಪಾಲನೆಗೋಸ್ಕರವೂ, ಇಷ್ಟಲಿಂಗವನ್ನು ಉಳಿಸಿಕೊಳ್ಳುವುದಕ್ಕೋಸ್ಕರವೂ ಉತ್ತರದಿಂದ ದಕ್ಷಿಣಕ್ಕೆ ವಲಸೆ ಬರುತ್ತಾರೆ. ಆದರೆ ದುರದೃಷ್ಟವಶಾತ್ ದಕ್ಷಿಣದಲ್ಲಿ ವೀರಶೈವ ದೊರೆಗಳಿರಲಿಲ್ಲ. ದಕ್ಷಿಣದಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕ ರಾಜ್ಯವಾಳುತ್ತಿದ್ದರು. ಉಣಲು ಅನ್ನ ದುಡಿಯಲು ಉದ್ಯೋಗವನ್ನರಸುತ್ತಾ ವಲಸೆ ಬಂದ ಈ ಲಿಂಗಾಯತರು ಕೊರಳಿನಲ್ಲಿ ಇಷ್ಟಲಿಂಗ, ರುದ್ರಾಕ್ಷಿ ಮಾಲೆ, ತಲೆಯಲ್ಲಿ ರುಮಾಲು, ಹಣೆಯಲ್ಲಿ ವಿಭೂತಿ ಧರಿಸಿಕೊಂಡು ಸಚ್ಚಾರಿತ್ರö್ಯವುಳ್ಳ ಸಂತರ ತರಹ ಕಾಣುತ್ತಿದ್ದುದರಿಂದ ಇಂತಹ ಶಿವಶರಣರನ್ನು, ಶಿವಭಕ್ತರನ್ನು ಅಡಿಯಾಳಾಗಿ ಇರಿಸಿಕೊಂಡು ಕೆಲಸವನ್ನು ಮಾಡಿಸಿದರೆ, ಮಾಂಸಹಾರಿಗಳಾದ ನಾವು ಇವರಿಗೆ ನಮ್ಮ ಕೈಯಾರೆ ಅನ್ನ ಆಹಾರವನ್ನು ನೀಡಿದರೆ ಆ ದೇವರು ನಮಗೆ ಮುನಿಯಬಹುದು, ಅಂತಹ ಶ್ರೇಷ್ಠ ಕುಲದವರನ್ನು ನಮ್ಮಂತವರು ದುಡಿಸುವುದೂ ಸರಿಯಲ್ಲ ಎಂಬ ಭಯದಿಂದ ಆ ಲಿಂಗಾಯತರಿಗೆ ಉದ್ಯೋಗವನ್ನು ನೀಡಲು ಎಲ್ಲರೂ ಅಂಜುತ್ತಾರೆ. ಈ ಶಿವಭಕ್ತರಿಗೆ ಉದ್ಯೋಗ ಹಾಗೂ ಉದರ ಪೋಷಣೆಗೆ ತಮ್ಮ ಸರ್ವಸ್ವವಾದ ಇಷ್ಠಲಿಂಗವೇ ತೊಡಕಾಗಿ ಪರಿಣಮಿಸಿತು.
ಈ ಕಾರಣಕ್ಕೆ ತಮ್ಮ ಆರಾಧ್ಯ ಸ್ವಾಮಿಯಾಗಿರುವ, ಕೋಟೇಶ್ವರ ಕೋಟಿಲಿಂಗ ಮಹಾರುದ್ರ ಸ್ವಾಮಿಯ ಸನ್ನಿಧಿಗೆ ಬಂದು ತಾವು ಧರಿಸಿಕೊಂಡಿದ್ದ ಲಿಂಗಗಳನ್ನು ಮಹಾರುದ್ರ ಸ್ವಾಮಿಯ ಪಾದಕ್ಕೆ ಅರ್ಪಿಸಿ ಮಹಾಕಾರ್ನಿಕಗಳಿಂದ ಕೂಡಿದ ಕೋಟೇಶ್ವರ ದೇವರ ಆಳವಾದ ಕೆರೆಯಲ್ಲಿ ವಿಸರ್ಜಿಸಿದರು. ಅಲ್ಲಿಂದ ಗತ ಜೀವನದ ಆಚಾರ ವಿಚಾರ ಕ್ರಮ, ಪದ್ದತಿಗಳನ್ನು ಬಿಟ್ಟು ಆ ಕಾಲದಲ್ಲಿ ಅಧಿಕಾರದಲ್ಲಿ ಮೆರೆಯುತ್ತಿದ್ದ ಗುತ್ತು ಬಳಿಕೆಗಳ, ಬಂಟರ ಒಡನಾಟದಲ್ಲಿದ್ದು ಅವರ ಅಡಿಯಾಳಾಗಿ ಬೇಸಾಯದ, ಕಟ್ಟಡದ ಕೆಲಸಗಳಲ್ಲಿ ದುಡಿದು ಕಷ್ಟದಲ್ಲಿ ಜೀವಿಸತೊಡಗಿದರು. ಬರಬರುತ್ತಾ ಸರ್ವಸ್ವವನ್ನು ಕಳಕೊಂಡ ಇವರು ಗುತ್ತು ಬಳಿಕೆಯವರ ಜಾಗದಲ್ಲಿಯೇ ನೆಲೆ ನಿಂತು ಅವರ ಬೇಸಾಯದ ಕೆಲಸಗಳನ್ನು ಇವರೇ ಮಾಡಿಕೊಂಡು ಅವರ ಬಂಧನಗಳಿಗೆ ಗುರಿಯಾಗಿ ಅವರ ಮೂಲದ ಆಳುಗಳೆನೆಸಿಕೊಂಡು ಗುಲಾಮರಂತೆ ಜೀವಿಸತೊಡಗಿದರು. ಕಾಲಕ್ರಮೇಣ ಗುಲಾಮ ಗಿರಿಯ ಪರಮಾವಧಿಯಾಗಿ ಇವರು ಅಸ್ಷೃಶ್ಯತೆಗೆ ತುತ್ತಾದರು. ಇಲ್ಲಿಯೆ ಉತ್ತರ ಭಾಗದಲ್ಲಿದ್ದವರಿಗೆ “ಉಪ್ಪಾರ”ರೆಂದೂ ದಕ್ಷಿಣ ಭಾಗದಲ್ಲಿದ್ದವರಿಗೆ”ಮುಂಡಾಲ”ರೆoದೂ ಕರೆಯುವುದು ವಾಡಿಕೆಯಾಯಿತು.
ಮುಂಡಾಲ ಜನಾಂಗವು ಅವನತಿಗಿಳಿದು ಹಿನಾವಸ್ಥೆಯಿಂದ ಬಳಲುವುದನ್ನು ಕಂಡು ಬಡ ಭಕ್ತಾಧಿಗಳನ್ನು ಉದ್ಧರಿಸಿ ಕಾಪಾಡಲು ಈ ಕುಲದ ಸ್ವಾಮಿಯಾಗಿರುವ ಇಕ್ಕೇರಿಯ ಆ ಮಹಾಶಿವನೇ ಆಕಾಲದಲ್ಲಿ ಉಡುಪಿ ಜಿಲ್ಲೆಯ, ಬಾರಕೂರು ಹೋಬಳಿ ಕಚ್ಚೂರು ಗ್ರಾಮದಲ್ಲಿ ಅವತರಿಸಿ ಮಾನವ ರೂಪದಲ್ಲಿ ಪವಾಡ ಪುರುಷನಾಗಿಯೂ ದೈವ ಸ್ವರೂಪದಲ್ಲಿ ಜಗತ್ತಿನ ಸಮಸ್ತ ದೈವಗಣಗಳಿಗೆ ಅಗ್ರಗಣ್ಯನಾಗಿಯೂ ದುಷ್ಠ ಶಿಕ್ಷಕ-ಶಿಷ್ಠ ರಕ್ಷಕ ಭಗವಾನ್ ಶ್ರೀ ಬಬ್ಬುಸ್ವಾಮಿಯಾಗಿ ತುಳುನಾಡಿನಾದ್ಯಂತ ನೆಲೆಯಾದರು.
ಇಂದಿನ ತುಳುನಾಡಿನಲ್ಲಿ ಎಲ್ಲಾ ವರ್ಗದ ಜನರೂ ಮುಖ್ಯವಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪರಿಶಿಷ್ಠ ಜಾತಿಗೆ ಸೇರಿದ, ಮುಂಡಾಲ ಜಾತಿ ಪಂಗಡವರು ತಮ್ಮ ಆರಾಧ್ಯ ದೈವವೆಂದು ಶ್ರೀ ಬಬ್ಬುಸ್ವಾಮಿ ದೈವವನ್ನು ನಂಬಿರುವರು. ಬ್ರಹ್ಮಾವರದ ಬಾರಕೂರಿನಿಂದ ಮೊದಲ್ಗೊಂಡು ದಕ್ಷಿಣ ಕೇರಳದ ನೀಲೇಶ್ವರ ಗಡಿಯವರೆಗೆ ಬಬ್ಬುಸ್ವಾಮಿಯನ್ನು ಆರಾಧಿಸುತ್ತಾರೆ.