ಸಮಾಜದಲ್ಲಿ ಜಾತೀಯತೆ, ಅಸ್ಪೃಶ್ಯತೆ, ಅಸಮಾನತೆಯೆಂಬ ಪರಿಸ್ಥಿತಿಯಲ್ಲಿ ದಲಿತರ ಏಳಿಗೆಗಾಗಿ ಜೀವನವನ್ನೇ ಪಣತೊಟ್ಟ ಧೀಮಂತ ಚಿಂತಕ, ಸಮಾಜ ಸುಧಾರಕ ಪರಮ ಪೂಜ್ಯ ಕುದ್ಮುಲ್ ರಂಗರಾವ್ ಜಾತೀಯತೆಯ ಕರಿನೆರಳು ದಟ್ಟವಾಗಿ ಹರಡಿದ್ದ ಜಿಲ್ಲೆಯ ಜನರ ಬದುಕಿನ ಬದಲಾವಣೆಗೆ ನಾಂದಿಹಾಡಿದವರಲ್ಲಿ ಅಗ್ರಗಣ್ಯರು.

Shri Kudmal Rangarao“ಕುದ್ಮುಲ್” ಎಂಬ ಚಿಕ್ಕ ಹಳ್ಳಿಯಲ್ಲಿ ಪ್ರತಿಷ್ಠಿತ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ದಿ.: ೨೯/೦೬/೧೮೫೯ರಲ್ಲಿ ದೇವಪ್ಪಯ್ಯ, ಶ್ರೀಮತಿ ಗೌರಿ ಅವರ ಹಿರಿಯ ಮಗನಾಗಿ ಕುದ್ಮುಲ್ ರಂಗರಾಯರ ಜನನವಾಯಿತು. ನಂತರ ರಾಯರು ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಕಷ್ಟಪಟ್ಟು ಪ್ಲೀಡರ್‌ಶಿಫ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಧ್ಯಾಪಕ ವೃತ್ತಿಯನ್ನು ಕೈಬಿಟ್ಟು ಮಂಗಳೂರು ಡಿಸ್ಟಿçಕ್ಟ್ ಕೋರ್ಟಿನಲ್ಲಿ ವಕಾತಲು (ವಕೀಲ) ವೃತ್ತಿಯನ್ನು ಕೈಗೊಂಡರು.

ಕೋರ್ಟಿನಲ್ಲಿ ವಕೀಲ ವೃತ್ತಿಯಲ್ಲಿದ್ದಾಗ ಸತ್ಯನಿಷ್ಟೆ, ಪ್ರಮಾಣಿಕತೆಯಿಂದ ಬಡವರ, ದೀನದಲಿತರ ವಕಾಲತನ್ನು ವಹಿಸಿ ಅವರಿಗಾದ ಅನ್ಯಾಯದ ವಿರುದ್ಧ ಮಾಡಲಾದ ಕಾನೂನು ಬಾಹಿರ ಆರೋಪಗಳ ವಿರುದ್ಧ ಹೋರಾಡುತ್ತಿದ್ದರು. ೧೮೮೭-೮೬ರಲ್ಲಿ ನಡೆದಿರಬಹುದೆಂದು ಹೇಳಲಾದ ಒಂದು ಘಟನೆ ರಂಗರಾಯರನ್ನು ಪೂರ್ಣ ಪ್ರಮಾಣದಲ್ಲಿ ದೀನದಲಿತರ ಸೇವೆಗೆ ತೊಡಗಿಕೊಳ್ಳುವಂತೆ ಮಾಡಿತು. ಅಸ್ಪೃಶ್ಯರಿಗಾಗಿ ಸರಕಾರ ಶಾಲೆಯನ್ನು ತೆರೆದಿತ್ತು. ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಅಲ್ಲಿ ಮಕ್ಕಳಿಗೆ ಕಲಿಸಲು ಯಾರೂ ಮುಂದೆ ಬರುತ್ತಿರಲಿಲ್ಲ. ಈ ಘಟನೆ ರಂಗರಾಯರ ವಕಾಲತ್ತು ಜೀವನಕ್ಕೆ ಪೂರ್ಣವಿರಾಮ ಮಾಡುವಂತಾಯಿತು. ಸಾಮಾಜಿಕ ಭಿನ್ನತೆ, ಅಸಮಾನತೆಯು ವಿಭಿನ್ನ ಸಾಮಾಜಿಕ ಏರುಪೇರಿನ ನ್ಯಾಯ ನೀತಿ ಧರ್ಮ ಇವರುಗಳ ವೈಫಲ್ಯವನ್ನು ಅರಿತುಕೊಂಡ ರಾಯರು, ಕಾನೂನು ಕಾಯ್ದೆಗಳ ನಡುವಿನ ಹೋರಾಟದಿಂದ ಕೆಲಸವಾಗುವುದಿಲ್ಲ. ಅಸ್ಪರ್ಶ ಸಮಾಜದ ನಡುವೆ ಬೆರೆತು ಮಾನವೀಯ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ನಿರ್ಧರಿಸಿದರು.

ಮಂಗಳೂರಿನಲ್ಲಿ “ಬ್ರಹ್ಮ ಸಮಾಜ” ಸ್ಥಾಪನೆ ಮಾಡಿದ್ದು ರಂಗರಾಯರ ಭಾವ ರಘುನಾಥಯ್ಯ. ಬ್ರಹ್ಮ ಸಮಾಜದ ಸಮಾನತೆ, ಉದಾತ್ತ ಧ್ಯೇಯ, ಧಾರ್ಮಿಕ ಕಾರ್ಯಗಳು, ಸಮಾಜದ ಅನಿಷ್ಠ ಪದ್ಧತಿಯನ್ನು ವಿರೋಧಿಸಿ ಹೊಸತೊಂದು ಸ್ವಚ್ಛ ಸಮಾಜದ ಕಲ್ಪನೆ ರಾಯರನ್ನು ಆಕರ್ಷಿಸಿತ್ತು. ಬ್ರಹ್ಮ ಸಮಾಜದ ಕ್ರಿಯಾಶೀಲ ಕಾರ್ಯಕರ್ತರಾಗಿ ತನ್ನನ್ನು ತೊಡಗಿಸಿಕೊಂಡರು.

“ನನ್ನ ಶಾಲೆಯಲ್ಲಿ ಕಲಿತ ಒಬ್ಬ ದಲಿತ ಜನಾಂಗದ ಹುಡುಗ ಸರ್ಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಯಲ್ಲಿ ಕಾರಿನಲ್ಲಿ ಓಡಾಡಬೇಕು” ಆಗ ಎದ್ದ ಧೂಳು ನನ್ನ ತಲೆಗೆ ತಾಗಿದರೆ ನನ್ನ ಜನ್ಮ ಸಾರ್ಥಕ. ಪ್ರತಿಯೊಬ್ಬ ಪರಿಶಿಷ್ಟ ವರ್ಗ, ಜಾತಿ ಜನಾಂಗದವರಿಗೆ ರಂಗರಾಯರ ಈ ಮಾತು ಸ್ವಾಭಿಮಾನಿಯಾಗಿ ಸಮಾಜವನ್ನು ಮುನ್ನಡೆಸಿ ನಡೆ ಎನ್ನುವ ದೇವ ವಾಕ್ಯ ಎಂದರೆ ಅತೀಶಯೋಕ್ತಿಯಾಗಲಾರದು. ಪರಿಶಿಷ್ಟ ಜಾತಿ, ಪಂಗಡದವರ ಉದ್ಧಾರದ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲೆ ಮತ್ತು ಆಶ್ರಮಶಾಲೆಗಳನ್ನು ಸ್ಥಾಪನೆ ಮಾಡಲು ನಿರ್ಧರಿಸಿ ೧೮೯೨ ಮಂಗಳೂರಿನ ಉರ್ವ ಚಿಲಿಂಬಿ ಎಂಬಲ್ಲಿ ಒಂದು ಹುಲ್ಲಿನ ಛಾವಣಿಯ ಮನೆ ಬಾಡಿಗೆಗೆ ಗೊತ್ತು ಮಾಡಿಕೊಂಡರು. ತಮ್ಮ ಸ್ವಂತ ನಿಧಿಯಿಂದಲೇ ಶಾಲೆ ಆರಂಭಿಸಿದರು ಆದರೆ ವೇಲ್ವರ್ಗದವರ ಕಿರುಕುಳದಿಂದಾಗಿ ಮುಚ್ಚಿದರೂ ದೃತಿಗೆಡದೆ ನಗರದ ಕಂಕನಾಡಿ ಮತ್ತು ಬೋಳೂರು ಎಂಬಲ್ಲಿ ಎಲಿಮೆಂಟರಿ ಶಾಲೆಯನ್ನು ಸ್ಥಾಪಿಸಿದರು. ವಿಶೇಷವೆೆಂದರೆ ಕಲಿಕೆಯ ಜೊತೆಗೆ ವೃತ್ತಿ ಶಿಕ್ಷಣ, ಕೈಗಾರಿಕಾ ತರಬೇತಿ ಶಾಲೆಯನ್ನು ಶೇಡಿಗುಡ್ಡೆಯಲ್ಲಿ ಕಟ್ಟಿಸಿದರು. ರಂಗರಾಯರು ದಲಿತ, ಹಿಂದುಳಿದ ಮಕ್ಕಳಿಗಾಗಿ ಸ್ಥಾಪಿಸಿದ ಈ ಶಾಲೆಯನ್ನು “ಪಂಚಮಠ ಶಾಲೆ” ಎಂದು ಕರೆಯುತ್ತಿದ್ದರು.

೧೮೯೭ರಲ್ಲಿ ದಿ ಡಿಪ್ರೇಸಡ್ ಕ್ಲಾಸಸ್ ಮಿಷನ್ (Depressed Classes Mission) ಅನ್ನು ಸ್ಥಾಪಿಸಿ ರಘುನಾಥಯ್ಯನವರು (ಆ.ಅ.ಒ) ಸಂಸ್ಥೆಯ ಅಧ್ಯಕ್ಷರನ್ನಾಗಿ ಮಾಡಿ, ರಂಗರಾಯರು ಅದರ ಸ್ಥಾಪಕ ಕಾರ್ಯದರ್ಶಿಯಾದರು, ಇಲ್ಲಿ ಓದು ಬರಹ ದೃಷ್ಟಿ, ವೃತ್ತಿಪರ ಶಿಕ್ಷಣ, ಬಡಗಿ ಕೆಲಸ, ನೇಯ್ಗೆ, ತೋಟಗಾರಿಕೆ, ಕಸೂತಿ, ರೇಶ್ಮೆ ತಯಾರಿಸುವುದು ಇತ್ಯಾದಿ ತರಬೇತಿ ಶಿಕ್ಷಣ ಅಲ್ಲಿ ಕಲ್ಪಿಸಲ್ಪಡುತ್ತಿದ್ದವು.

ದಲಿತ ಜನಾಂಗದ ಉದ್ದಾರಕ್ಕಾಗಿ ತನ್ನ ಸರ್ವಸ್ವವನ್ನು ಪಣಕಿಟ್ಟ ರಂಗರಾಯರು ಬಡಜನರಿಗಾಗಿ ಸ್ವಾವಲಂಬಿ ಜೀವನ ಬದುಕಲು ಕೃಷಿ ಮತ್ತು ವಸತಿ ನಿರ್ಮಾಣ ವ್ಯವಸ್ಥೆಯನ್ನು ಕಟ್ಟಿಸಿಕೊಟ್ಟರು. ರಾಯರು ಕೆಲವು ಶ್ರೀಮಂತ ಜಮೀನುದಾರರಿಂದ ಜಮೀನನ್ನು ಪಡೆದುಕೊಂಡು ದಲಿತ ಜನಾಂಗದವರಿಗೆ ಮನೆ ಕಟ್ಟಲು, ಕೃಷಿ ಮಾಡಲು ವಿತರಣೆ ಮಾಡಿದರು.

ಕೊರಗ ಸಮಾಜದವರಿಗಾಗಿ ಮುನ್ಸಿಪಾಲಿಟಿ ಪಂಚಾಯಿತಿಗಳಲ್ಲಿ ‘ನಗರ ನೈರ್ಮಲ್ಯದ ಉದ್ಯೋಗ ಕೊಡಿಸುವಲ್ಲಿ ರಂಗರಾಯರು ಸಂಸ್ಥೆಯ ಅಧಿಕಾರಿಗಳಿಗೆ ಪತ್ರ ಬರೆದು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿ ಸಾಮಾಜಿಕ ಬದಲಾವಣೆ ಉಂಟು ಮಾಡಿದರು.

ಜಿಲ್ಲಾ ಬೋರ್ಡ್ ಮತ್ತು ಮಂಗಳೂರು ಪುರಸಭೆಯಲ್ಲಿ ಪರಿಶಿಷ್ಟ ಪಂಗಡದವರಿಗೆ ಪ್ರಾತಿನಿಧ್ಯ ಸವಲತ್ತು ದೋರೆಯುವಂತೆ ಮಾಡಿದರು. ರಂಗರಾಯರು ದಲಿತರ ಅಧಿಕಾರ ಸ್ಥಿತಿಯನ್ನು ಅಭಿವೃದ್ದಿ ಪಡಿಸುವ ಸಲುವಾಗಿ ಸಹಕಾರ ಸಂಘವನ್ನು ಸ್ಥಾಪಿಸಲು ನಿರ್ಧರಿಸಿದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ದಲಿತ ಸಹಕಾರಿ ಸಂಘ ಕೋರ್ಟಪಿಲ್ ಆದಿ ದ್ರಾವಿದ ಸಂಘ ನಗರದ ಶೇಡಿಗುಡ್ಡೆಯಲ್ಲಿ ಸ್ಥಾಪಿಸಿದರು. ೧೯೩೪ ಪ್ರೆ.೨೪ರಂದು ದಕ್ಷಿಣಕನ್ನಡ ಜಿಲ್ಲೆಗೆ ಗಾಂಧಿಜಿ ಭೇಟಿ ಕೊಟ್ಟ ಸಂದರ್ಭ ರಂಗರಾಯರ ಅಸ್ಪಶ್ಯತೆ ನಿವಾರಣ ಕೆಲಸ ಕಾರ್ಯಗಳನ್ನು ತಿಳಿದು ಅಸ್ಪಶ್ಯತೆ ನಿವಾರಣೆಯಲ್ಲಿ ರಂಗರಾಯರೇ ನನ್ನ ಗುರುಗಳು ಎಂದು ಮಹಾತ್ಮರ ಗುರುಗಳೆನಿಸಿದರು.

ರಂಗರಾಯರು ತನ್ನ ಜೀವಿತದ ಕೊನೆಯ ಕಾಲವನ್ನು ಬ್ರಹ್ಮ ಸಮಾಜದ ಚಟುವಟಿಕೆ ಮತ್ತು ಆಧ್ಯಾತ್ಮಿಕ ಚಿಂತನೆಯಲ್ಲಿ ಕಳೆದರು. ೧೯೨೭ರಲ್ಲಿ ಸನ್ಯಾಸ ದೀಕ್ಷೆ ಪಡೆದು “ಈಶ್ವರಾನಂದ” ಸನ್ಯಾಸಿಯೆಂದು ನಾಮಕರಣ ಮಾಡಿದರು.

೧೯೨೮ನೇ ಜನವರಿ ೩೦ರಂದು ರಂಗರಾಯರು ಇಹಲೋಕ ತ್ಯಜಿಸಿದರು. ಅವರಿಗೆ ೬೯ ವರ್ಷ ವಯಸ್ಸಾಗಿತ್ತು. ತನ್ನ ಕೊನೆಯ ಕಾಲದಲ್ಲಿ ತಾನು ಮೃತಪಟ್ಟ ನಂತರ ಜಿಲ್ಲೆಯ ಅಸ್ಪಶ್ಯ ಪಂಗಡದವರಲ್ಲೇ ಹಿಂದುಳಿದ ಜಾತಿಯೆಂದು ಹೇಳಲಾದ “ತೋಟಿ” ಪಂಗಡದವರು ತನ್ನ ಕಳೆಬರವನ್ನು ಸ್ಮಶಾನಕ್ಕೆ ಹೊತ್ತು ಕೊಂಡೊಯ್ಯುವ ವ್ಯವಸ್ಥೆ ಆಗಬೇಕು ಎಂದು ತನ್ನ ವೀಲುನಾಮೆಯಲ್ಲಿ ಬರೆದಿಟ್ಟಿದ್ದರು.

ನಂದಿಗುಡ್ಡೆಯ ಬ್ರಹ್ಮ ಸಮಾಜದ ಕಡೆಗೆ ಭಜನೆ ಪ್ರಾರ್ಥನೆಯೊಂದಿಗೆ ರಂಗರಾಯರ ಅಂತಿಮ ದರ್ಶನಕ್ಕೆ ಅವಕಾಶ ಕೊಡಲಾಯಿತು.

ದೀನದಲಿತರ ಬಂಧು, ಪಿತಾಮಹ, ದಲಿತೋದ್ಧಾರಕ, ದೀಮಂತ, ತ್ಯಾಗಶೀಲ, ಮತ್ತು ಸತ್ಯಸಂಧ ಮಾತ್ರವಲ್ಲ, ತನ್ನ ಸರ್ವಸ್ವವನ್ನು ಸಮಾಜಕ್ಕೆ ಅರ್ಪಿಸಿಕೋಂಡ ನಿಷ್ಠಾವಂತ ಸಮಾಜ ಸುಧಾರಕ ಕುದ್ಮುಲ್ ರಂಗರಾಯರು ಅಜರಾಮರರಾದರು.