ನಮ್ಮ ತುಳುನಾಡು ದೈವಾರಾಧನೆ, ನಾಗಾರಾಧನೆ ಜೊತೆಗೆ ಪ್ರಕೃತಿಯನ್ನು ಆರಾಧಿಸುತ್ತಾ, ಇಲ್ಲಿನ ಜನರು ಆಚಾರ-ವಿಚಾರ ಸಂಸ್ಕೃತಿಯನ್ನು ಉಳಿಸುವ ಮೂಲಕ ತನ್ನ ಶ್ರೀಮಂತಿಕೆಯನ್ನು ಮೆರೆದ ಪುಣ್ಯಭೂಮಿ ನಮ್ಮ ತುಳುನಾಡು.
ಬಬ್ಬುಸ್ವಾಮಿ, ತನ್ನಿಮಾನಿಗ, ಕಲ್ಲುರ್ಟಿ ಕಲ್ಕುಡ, ಕಾನದ ಕಟದ, ಕೊರಗ ತನಿಯ, ಕೋಟಿ ಚೆನ್ನಯ್ಯ, ಕಾಂತಬಾರೆ-ಬೂದಬಾರೆ ಮುಂತಾದ ಅನೇಕ ಕಾರಣಿಕ ಪುರುಷರು ಜನ್ಮವೆತ್ತಿ ತನ್ನ ಕಾರಣಿಕ ಶಕ್ತಿಯಿಂದ ಮೆರೆದು ಮಾಯವಾದ ನಂತರ ದೈವಗಳಾಗಿ ತುಳುನಾಡಿನ ಪುಣ್ಯ ಭೂಮಿಯಲ್ಲಿ ನೆಲೆನಿಂತು ಸಮಾಜ ಬಾಂಧವರಿoದ ಅವರವರ ಶಕ್ತಿಯನುಸಾರ ಗುಡಿ, ದೈವಸ್ಥಾನಗಳನ್ನು ನಿರ್ಮಿಸಿ ಅನಾದಿ ಕಾಲದಿಂದಲೂ ಆರಾಧಿಸಲ್ಪಟ್ಟು ವಾರ್ಷಿಕ ನೇಮೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುತ್ತಾರೆ.
ಇoತಹ ನಾಡಲ್ಲಿ ದೇವರಿಗಿಂತ ಒಂದು ಮೆಟ್ಟಿಲು ಕಿರಿದಾಗಿಯೂ ಎಲ್ಲಾ ದೈವಗಳಿಗಿಂತ ಒಂದು ಮೆಟ್ಟಿಲು ಹಿರಿದಾಗಿಯೂ ಅಪಾರ ಕಾರಣಿಕ ಶಕ್ತಿ ಹೊಂದಿರುವ ದೈವವೇ ದೈವರಾಜ ಶ್ರೀ ಬಬ್ಬುಸ್ವಾಮಿ.
ಮುಂಡಾಲ ಸಮಾಜ ಬಾಂಧವರ ಕುಲದೇವರು ಆಗಿರುವ ಬಬ್ಬುಸ್ವಾಮಿ ಮುಂಡಾಲ ದಂಪತಿಗಳಾದ ಕಚ್ಚೂರ ಮಾಲ್ದಿ ಮತ್ತು ಕೌಡೂರ ಬೊಮ್ಮುವಿಗೆ ಮಗುವಾಗಿ ಜನಿಸಿದನು. ಎಳವೆಯಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಅನಾಥ ಮಗುವಾದ ಬಬ್ಬುಸ್ವಾಮಿ ಕೋಡಿಕಂಡಾಳ ಗುತ್ತಿನ ಒಡೆಯರಾದ ಕೊಡಂಗೆ (ಕಾಂತಣ್ಣ) ಬನ್ನಾರ್ ಹಾಗೂ ಅವರ ತಂಗಿ ಮೈರಕ್ಕೆ (ಸಿರಿಗಿಂಡೆ)ಯು ಅಂದಿನ ಜಾತಿ ಪದ್ದತಿ ಕಟ್ಟಳೆಯಲ್ಲಿ ಎಲ್ಲವನ್ನು ದಿಕ್ಕರಿಸಿ ಮುಂಡಾಲ ಜಾತಿಯ ಮಗುವನ್ನು ಬಹಳ ಪ್ರೀತಿಯಿಂದ ಸಾಕಿ ಸಲಹಲು, ಕೊಡಂಗೆ ಬನ್ನಾರರು ಊರ ಪರಊರ ಅರಸು ಮಂತ್ರಿಗಳ ಕೆಂಗಣ್ಣಿಗೆ ಗುರಿಯಾಗುತ್ತಾರೆ.
ಬಾಲ್ಯದಲ್ಲಿಯೇ ಮಗು ಬಬ್ಬು ಅತಿಮಾನುಷ ಶಕ್ತಿಯ ಮೂಲಕ ಅಂಗಳದಲ್ಲಿ ಸತ್ತು ಬಿದ್ದಿರುವ ಕೋಳಿ ಕಾಗೆಗಳಿಗೆ ಮರುಜೀವ ನೀಡಿ ಕರ‍್ದಬ್ಬು ಎಂದು, ಮಂತ್ರ ತಂತ್ರ ವೈದ್ಯ ಬೈದ್ಯದಲ್ಲಿ ನಿಸ್ಸೀಮನಾಗಿ ವೈದ್ಯನಾಥ ಎಂದೂ ಕರೆಸಿಕೊಳ್ಳುತ್ತಾನೆ. ಕೋಟೆ ಕಟ್ಟುವ ಶಿಲ್ಪ ವಿದ್ಯೆಯನ್ನು ಕರಗತ ಮಾಡಿಕೊಂಡು ಕೋಟೆಯ ಬಬ್ಬು ಕೋಡ್ದಬ್ಬು ಎಂಬ ಬಿರುದನ್ನು ಪಡೆಯುತ್ತಾನೆ. ಹೀಗೆ ಹಲವಾರು ರೀತಿಯ ಕಾರಣಿಕ ಮೆರೆದು ತನ್ನ ವಿಶೇಷ ಶಕ್ತಿಯಿಂದ ಜನರ ರೋಗ ರುಜಿನಗಳಿಗೆ ಉಚಿತವಾಗಿ ಮದ್ದು ನೀಡುತ್ತಾ ಅವರ ಕಷ್ಟಗಳನ್ನು ದೂರ ಮಾಡುತ್ತಾನೆ. ಇದನ್ನು ಕಂಡು ಸಹಿಸದ ಕಠೋರ ಹೃದಯದ ಮಡಿವಂತ ಜನರು, ಮಂತ್ರಿ ಅರಸರು ಎಲ್ಲರೂ ಸೇರಿ ಕಂಚಿನಡ್ಕದ ಮಿಂಚಿನ ಬಾವಿಯಲ್ಲಿ ನೀರ ಒರತೆಯನ್ನು ತೋರಿಸಿ ಕೊಡುವಂತೆ ಬಬ್ಬುವಿನಲ್ಲಿ ಕೇಳಿಕೊಂಡು, ಬಬ್ಬು ಬಾವಿಗೆ ಇಳಿದಾಗ ಅದರ ಮೇಲೆ ಕಲ್ಲು ಚಪ್ಪಡಿಯನ್ನು ಮುಚ್ಚಿಸಿ ಬಬ್ಬುವನ್ನು ಜೀವಂತವಾಗಿ ಸಮಾಧಿಗೊಳಿಸುತ್ತಾರೆ. ಮತ್ತು ಅದರ ಮೇಲೆ ಅಶ್ವಥದ ಮರ ನೆಟ್ಟು ಬಬ್ಬುಕಟ್ಟೆ ಎಂದು ಹೆಸರಿಡುತ್ತಾರೆ. ಬಲಿಷ್ಠ ದೈವಗಳು ಅಲ್ಲಿಗೆ ಬಂದು ಪ್ರಯತ್ನಿಸಿದರೂ ಅವರಿಗೆ ಮುಚ್ಚಿರುವ ಹಾಸಿಕಲ್ಲು ತೆಗೆಯಲು ಸಾದ್ಯವಾಗದ ಸಮಯ ಅತ್ತ ಧಾವಿಸಿ ಬಂದ ಮಗೇರ ಜಾತಿಯ ಅಸಾಮಾನ್ಯ ಹೆಣ್ಣಾದ ತನ್ನಿಮಾನಿಗಳು ತನ್ನ ಕೈಯಲ್ಲಿದ್ದ ಗೆಜ್ಜೆ ಕತ್ತಿಯಿಂದ ೧೬ ಬಾರಿ ಗೀರಿ ಬಾವಿಗೆ ಮುಚ್ಚಿರುವ ಹಾಸುಕಲ್ಲನ್ನು ಒಡೆದು ತಾನು ಉಟ್ಟಿರುವ ಸೀರೆಯ ಮೂಲಕ ಮೇಲಕ್ಕೆ ಎತ್ತಿ ಮುಂಡಾಲ ಜಾತಿಯ ಬಬ್ಬು ಮತ್ತು ಮಗೇರ ಜಾತಿಯ ತನ್ನಿಮಾನಿಗಳು ಭಾವನಾತ್ಮಕ ಸಂಬoದದ ಮೂಲಕ ಅಣ್ಣ ತಂಗಿಯರಾಗಿ ಒಗ್ಗೂಡುತ್ತಾರೆ. ಇಲ್ಲಿ ಬಾವಿಯೊಳಗಿಳಿದ ಬಬ್ಬುಸ್ವಾಮಿಯು ನಾಗಬೀದಿಯಲ್ಲಿ ಸಾಗಿ ಕಾಳಿಂಗ ಸರ್ಪದ ಜೊತೆ ಕಾಳಗ ಮಾಡಿ ಅದರ ವಿಷವನ್ನು ತಂದು ಅದನ್ನೇ ಕರಿಗಂಧದ ರೂಪದಲ್ಲಿ ಭಕ್ತರಿಗೆ ನೀಡಿ ಅವರ ಸರ್ವ ಕಷ್ಟಗಳನ್ನು ದೂರ ಮಾಡುತ್ತಾರೆೆ ಎಂಬುದು ಪ್ರತೀತಿ.
ನಂತರ ಕಾಯ ಬಿಟ್ಟು ಮಾಯ ಸೇರಿ ದೈವಗಳಾಗಿ ಕೋಡ್ದಬ್ಬು ಮತ್ತು ತನ್ನಿಮಾನಿಗ ಪ್ರಪ್ರಥಮವಾಗಿ ಕೋಡಿಕಂಡಾಲದಲ್ಲಿ ನೆಲೆನಿಂತು ದೈವಸ್ಥಾನವನ್ನು ನಿರ್ಮಿಸಿ ಕೊಡಂಕೂರ ಕ್ಷೇತ್ರದಲ್ಲಿ ಲಿಂಗ ರೂಪದಲ್ಲಿ ಮುಂಡಾಲ ಸಮಾಜದವರಿಂದ ಪೂಜೆ ಪುರಸ್ಕಾರಗಳನ್ನು ಸ್ವೀಕರಿಸುತ್ತಾರೆ.
ಒಮ್ಮೆ ಸಾವಿರ ದೈವಗಳು ಗಂಗಾ ಸ್ನಾನ ಮಾಡಲು ಘಟ್ಟಸೀಮೆಯಿಂದ ತುಳುನಾಡಿಗೆ ಇಳಿದು ಬರುತ್ತಿರುವ ಸಂದರ್ಭ ಬಬ್ಬರ್ಯ ದೈವವು ಘಟ್ಟಕ್ಕೊಂದು ಕಾಲು ಸಮುದ್ರಕ್ಕೊಂದು ಕಾಲು ಇಟ್ಟು, ತುಳುನಾಡಿಗೆ ಹೋಗಬೇಕಾದರೆ ತನ್ನ ಎರಡು ಕಾಲ ಎಡೆಯಿಂದ ಹೋಗಬೇಕೆಂದು ಆಜ್ಞೆ ಮಾಡುತ್ತಾನೆ. ಇದರಿಂದ ಕಂಗೆಟ್ಟ ಕೆಲವು ದೈವಗಳು ಬಬ್ಬರ್ಯನಿಗೆ ಸೋತು ಅವನ ಕಾಲ ಎಡೆಯಿಂದ ಹೋಗುತ್ತವೆ. ಆದರೆ ಜಾರಂದಾಯ, ಕೊಡಮಂದಾಯ, ಕುಕ್ಕಿನಂತಾಯಾ, ಮೈಸಂದಾಯ ಮುಂತಾದ ರಾಜನ್ ದೈವಗಳು ಬಬ್ಬರ್ಯನಲ್ಲಿ ಅಡ್ಡ ಇಟ್ಟಿರುವ ಕಾಲು ತೆಗೆ ನಾವು ರಾಜನ್ ದೈವಗಳು, ನಿನ್ನ ಕಾಲ ಎಡೆಯಿಂದ ಹೋದರೆ ನಮಗೆ ತುಳುನಾಡಲ್ಲಿ ಸಿಗಬೇಕಾದ ಗೌರವ, ಪೂಜೆ ಪುರಸ್ಕಾರ ಸೀಗದೆ ಹೋಗುತ್ತದೆ ಎಂದು ಕೇಳಿಕೊಳ್ಳುತ್ತವೆ. ಏನು ಹೇಳಿದರೂ ಬಬ್ಬರ್ಯ ಕಾಲು ತೆಗೆಯದನ್ನು ಕಂಡು ವಾಪಸು ಬರುವ ಸಂದರ್ಭ ರಾಜನ್ ದೈವಗಳು ಬಬ್ಬುಸ್ವಾಮಿ ಘಟ್ಟ ಸೀಮೆಯಿಂದ ತಮ್ಮ ಬಳಿಯೇ ಬರುವುದನ್ನು ಕಂಡು, ಬಬ್ಬುವಿನಲ್ಲಿ ಬಬ್ಬರ್ಯನ ಕಾಲು ತೆಗೆದು ತಮಗೆ ತುಳುನಾಡಿಗೆ ಹೋಗಲು ಅನುವು ಮಾಡಿಕೊಟ್ಟರೆ ನಿನಗೆ ಅಡ್ಡ ಅಣಿ, ಕೋಲು ಗಗ್ಗರ, ಕಂಚಿನ ಮುಗ, ದೀವಟಿಗೆಗಳನ್ನು ಕೊಡುವುದು ಮಾತ್ರವಲ್ಲದೆ ‘ದೈವರಾಜ’ ಎಂದು ತುಳುನಾಡಿನಾದ್ಯಂತ ಮೆರೆಸಿಕೊಂಡು ತಾವು ನೆಲೆವೂರಿದ್ದ ಕಡೆಗಳಲ್ಲಿ ನಿನಗೂ ನೆಲೆಯಾಗಲು ಭೂಮಿಯನ್ನು ಬಿಟ್ಟುಕೊಡುವೆವು ಎಂದು ತಿಳಿಸುತ್ತವೆ. ಇದನ್ನು ಕೇಳಿದ ಬಬ್ಬುಸ್ವಾಮಿಯೂ ಬಬ್ಬರ್ಯನ ಬಳಿ ಬಂದು ವಿನಮ್ರದಿಂದ ಕಾಲು ತೆಗೆದು ದಾರಿ ಮಾಡಿಕೊಡಲು ವಿನಂತಿಸುತ್ತಾನೆ. ಇದನ್ನು ಕೇಳದ ಬಬ್ಬರ್ಯನ ದುರಾಹಂಕಾರಕ್ಕೆ ಬಬ್ಬುಸ್ವಾಮಿ ಉಗ್ರ ರೂಪ ತಾಳಿ ಬಬ್ಬರ್ಯನ ಕಾಲು ಕಡಿದು ಅವನ ಅಹಂಕಾರದ ರಕ್ತವನ್ನು ಭೂಮಿಗೆ ಹರಿಸಿ, ರಾಜನ್ ದೈವಗಳಿಗೆ ತುಳುನಾಡು ಸೇರಲು ದಾರಿ ಮಾಡಿಕೊಡುತ್ತಾನೆ. ಬಬ್ಬುವಿನ ಅಪಾರ ಮಹಿಮೆಯನ್ನು ಕಂಡ ಬಬ್ಬರ್ಯನು ಶರಣಾಗಲು, ಕಾಲು ಸರಿ ಪಡಿಸಿ ಕಡಲ ಸೀಮೆಯಲ್ಲಿ ನೆಲೆಯಾಗಿ ಅಬ್ಬರದ ಬಬ್ಬರ್ಯ ದೈವವಾಗಿ ಮೀನುಗಾರರ ಸಂಕಷ್ಟಗಳನ್ನು ದೂರಮಾಡಿ ಅವರಿಂದ ಪೂಜೆ ಪುರಸ್ಕಾರಗಳನ್ನು ಪಡೆದುಕೊ ಎಂದು ಅಭಯ ನೀಡುತ್ತಾನೆ. ಅಲ್ಲಿಂದ ಬಬ್ಬುಸ್ವಾಮಿಯು ದೈವರಾಜನೆಂದು ಪ್ರಸಿದ್ಧಿಯನ್ನು ಪಡೆಯುತ್ತಾನೆ.
ಬೆದ್ರದ ಗಡುವಿನಲ್ಲಿ ತಾಯಿ ಮಹಾಮ್ಮಾಯಿಯ ರಥೋತ್ಸವ, ಸೇವೆಗಳು ನಡೆಯದೆ ಅನೇಕ ವರ್ಷಗಳಾಗಿರುತ್ತವೆ. ಈ ಸಂದರ್ಭ ಬಬ್ಬುವು ಅಲ್ಲಿಗೆ ಬರುತ್ತಾನೆ. ಬಬ್ಬುವನ್ನು ಕಂಡ ತಾಯಿ ಮಹಾಮ್ಮಾಯಿಯು ಸಂತೋಷಗೊoಡು ಬಬ್ಬುವನ್ನು ಕರೆದು ತನ್ನ ಉತ್ಸವ, ಸೇವೆಗಳು ನಡೆಯುವಂತೆ ಮಾಡಿದರೆ, ವಿಶೇಷವಾಗಿ ಸಾಂಕ್ರಮಿಕ ರೋಗಗಳನ್ನು ದೂರ ಮಾಡುವ ಮಹಿಮೆ ಇರುವ ೬ ಮುಡಿ ಬೀಜ(ಧಾನ್ಯ)ಗಳಲ್ಲಿ ೩ ಮುಡಿ ಬೀಜಗಳನ್ನು ಬಹುಮಾನ ನೀಡುವುದಾಗಿ ತಿಳಿಸುತ್ತಾರೆ. ಇದನ್ನು ಕೇಳಿದ ಬಬ್ಬು ತಾಯಿ ಮಹಮ್ಮಾಯಿಯ ಉತ್ಸವ ನಡೆಯುವಂತೆ ಮಾಡಿ ಬ್ರಹ್ಮರಥ (ಮಾರಿಬಂಡಿ)ಕ್ಕೆ ಎದೆಕೊಟ್ಟು ಮೇಲೆತ್ತಿ ಬೆದ್ರದ ಗಡುವಿನಿಂದ ಬೋಳಾರ, ಅಲ್ಲಿಂದ ಬೋಳೂರು ಉರ್ವದ ಗಡಿ, ಸುರತ್ಕಲ್ ಉಪ್ಪುಂಜದ ಗಡಿ, ಅಲ್ಲಿಂದ ಕಾಪು ಗಡಿಯವರೆಗೆ ಆಕಾಶ ಮಾರ್ಗದಲ್ಲಿ ಹಾರಿಸಿಕೊಂಡು ತಾಯಿ ಮಹಮ್ಮಾಯಿಯನ್ನು ಅಲ್ಲಲ್ಲಿ ನೆಲೆಯೂರುವಂತೆ ಮಾಡುತ್ತಾನೆ.
ಬಬ್ಬುಸ್ವಾಮಿ ತನ್ನಿಮಾನಿಗ ಬಡಗು ಬಾರ್ಕೂರಿನಿಂದ ತೆಂಕು ನೀಲೇಶ್ವರದವರೆಗೆ ಮಾಯದ ಪಯಣದ ಮೂಲಕ ಸಂಚರಿಸುತ್ತಾ ತಮ್ಮ ಆಗಾಧವಾದ ಕಾರಣಿಕ ಮಹಿಮೆಗಳನ್ನು ತೋರ್ಪಡಿಸುತ್ತಾ ಮುಂಡಾಲ ಕುಲವನ್ನು ಉದ್ಧರಿಸಲು ಹಲವಾರು ಸ್ಥಳಗಳಲ್ಲಿ ನೆಲೆ ನಿಂತು ಮುಂಡಾಲ ಬಾಂಧವರನ್ನು ಒಗ್ಗೂಡಿಸಿ ದೈವಸ್ಥಾನಗಳನ್ನು ನಿರ್ಮಿಸುತ್ತಾ ಗುತ್ತು ಮನೆತನದವರನ್ನು ಊರಿನ ಎಲ್ಲಾ ಜಾತಿವರ್ಗಗಳನ್ನು ಒಟ್ಟು ಸೇರಿಸಿ, ಮುಂಡಾಲ ಜನಾಂಗದವರಿoದ ಆರಾಧನೆಗಳನ್ನು ಸ್ವೀಕರಿಸುತ್ತಾ ಹೋಮ ನೇಮದ ಸೇವೆಯನ್ನು ಪಡೆಯುತ್ತಾರೆ.
ಕರ್ನಾಟಕದ ಕೋಟೇಶ್ವರದಿಂದ ಕೇರಳದ ನೀಲೇಶ್ವರದುದ್ದಕ್ಕೂ ಬಬ್ಬುಸ್ವಾಮಿಯು, ಕರ‍್ದಬ್ಬು, ಕೋಟೆದ ಬಬ್ಬು, ವೈದ್ಯನಾಥ, ನೀಲಕಂಠ, ಮಾರಿ ಶಿವರಾಯ, ಕೆಂಚಿರಾಯ, ಜಠರಾಯ, ಕಾಳರಾಯ, ಕಾಳಭೈರವ, ವೀರಭದ್ರ, ಕ್ಷೇತ್ರಪಾಲ, ನಂದಿಕೇಶ್ವರ, ನಂದೀಶ್ವರ, ಮುಂಡದಾಯ, ಬೇತಾಳೇಶ್ವರ, ಭೂತರಾಜ, ಬೇತಾಳರಾಯ, ಕುಮಾರೇಶ್ವರ, ಬಾಬೇಶ್ವರ, ಮುತ್ತಪ್ಪಸ್ವಾಮಿ ಹೀಗೆ ಬೇರೆ ಬೇರೆ ಹೆಸರಿನಿಂದ ಕರೆಸಿಕೊಂಡು ಮುಂಡಾಲ ಸಮುದಾಯ ಮಾತ್ರವಲ್ಲದೆ ಬ್ರಾಹ್ಮಣ, ಜೈನರಿಂದಲೂ ಪೂಜೆಯನ್ನು ಪಡೆದುಕೊಳ್ಳುತ್ತಿರುವುದು ಸತ್ಯ.