ವಿಶ್ವದ ಜ್ಞಾನದ ಸಂಕೇತವೆಂದೇ ಇತಿಹಾಸ ಪುಟ ಸೇರಿದ, ಅಸ್ಪಶ್ಯ ಸಮಾಜಕ್ಕೆ ಸೂರ್ಯನಾಗಿ ಬೆಳಗಿದ ಆರಾಧ್ಯ ಮಹಾನ್ ಚೇತನರಾದ ಸಂವಿಧಾನ ಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರ್‌ರವರಿಗೆ ಪ್ರಥಮ ನಮನಗಳು.

Dr. B R. Ambedkarಅಂಬೇಡ್ಕರ್‌ರವರು 1891 ಎಪ್ರಿಲ್ 14 ರಂದು ಮಧ್ಯಪ್ರದೇಶದ ಮಾಹೆ ಎಂಬಲ್ಲಿ ‘ಮಹಾರ್’ ಎಂಬ ಅಸ್ಪಶ್ಯ ಜಾತಿಯಲ್ಲಿ ಜನಿಸಿದರು. ತಂದೆ ರಾಮ್‌ಜೀ ಸಕ್ವಾಲ್, ತಾಯಿ ಭೀಮಬಾಯಿ. ತಂದೆ ರಾಮ್‌ಜೀ ಸಕ್ವಾಲರು ಬ್ರಿಟಿಷರ ಸೈನ್ಯದಲ್ಲಿ ಸುಬೇದರಾಗಿ ಅಧಿಕಾರವನ್ನು ನಿರ್ವಹಿಸಿದ್ದರು. ಇವರಿಗೆ 14 ಜನ ಮಕ್ಕಳು. 14ನೇ ರತ್ನನೇ ಬಾಬಾ ಸಾಹೇಬ್ ಅಂಬೇಡ್ಕರ್. ಅಂಬೇಡ್ಕರ್‌ರವ ರಿಗೆ 14ನೇ ವರ್ಷವಿರುವಾಗ ಇವರ ಬಾಳ ಸಂಗಾತಿಯಾಗಿ ಬಂದವರು ರಮಾಬಾಯಿ. ಇವರು ಜನ್ಮ ನೀಡಿದ ಮಕ್ಕಳಲ್ಲಿ ಯಶವಂತ್ ರಾವ್ ಮಾತ್ರ ಬದುಕುಳಿದರು.

ಕಬೀರ ಭಕ್ತಿ ಪಂಥವು ಆಗಿನ ಅಸ್ಪಶ್ಯ ಜನಾಂಗಕ್ಕೆ ಶಾಂತಿ ಸಮಾಧಾನಗಳನ್ನು ನೀಡುವ ಪಂಥವಾಗಿತ್ತು. ಅಸ್ಪಶ್ಯನೆಂಬ ಕಾರಣಕ್ಕೆ ಶಾಲೆಯಲ್ಲಿ ನಿರಂತರ ಶೋಷಣೆಯನ್ನು ಅನುಭವಿಸುತ್ತಿದ್ದ – ಅಂಬೇಡ್ಕರ್‌ರವರಿಗೆ ಅಲ್ಲಿನ ಓರ್ವ ಬ್ರಾಹ್ಮಣ ಶಿಕ್ಷಕರಾದ ಫೆಂಡ್ಲಿ ಅಂಬೇಡ್ಕರ್‌ರವರು ಭೀಮ್‌ರಾವ್‌ರವರ ಹೆಸರಿನ ಜೊತೆಗೆ ತಮ್ಮ ಹೆಸರನ್ನು ಸೇರಿಸಿ ಹಾಜರಿಯಲ್ಲಿ ಭೀಮ್ರಾವ್ ಅಂಬೇಡ್ಕರ್‌ ಎಂದು ನಮೂದಿಸಿದರು. ಅಂದಿನಿಂದ ಭೀಮರಾವ್ ಅಂಬೇಡ್ಕರ್ ಆದರು. ನಂತರ ಎಲ್‌ಫಿಸ್ಟನ್ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಪಡೆಯುತ್ತಾರೆ. ಉನ್ನತ ವ್ಯಾಸಂಗಕ್ಕಾಗಿ ಬರೋಡಾದ ಮಹಾರಾಜರು ಯೋಗ್ಯ ವಿದ್ಯಾರ್ಥಿಗಳಿಗೆ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯಗಳಲ್ಲಿ ಓದಲು ಶಿಷ್ಯವೇತನ ಘೋಷಣೆ ಮಾಡುತ್ತಾರೆ. ಶಿಷ್ಯವೇತನವನ್ನು ಪಡೆದ ಅಂಬೇಡ್ಕರ್‌ರವರು ಅಮೇರಿಕಾಕ್ಕೆ ಪ್ರಯಾಣ ಬೆಳೆಸುತ್ತಾರೆ. ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ತತ್ವಜ್ಞಾನ, ರಾಜ್ಯಶಾಸ್ತ್ರದಲ್ಲಿ ಅಧ್ಯಯನ ಮಾಡುತ್ತಾರೆ. 1915ರಲ್ಲಿ ‘ಪ್ರಾಚೀನ ಭಾರತದ ವಾಣಿಜ್ಯ’ ಪ್ರಬಂಧ ಮಂಡಿಸಿ ಎಂ.ಎ ಪದವಿ ಹಾಗೂ 1916ರಲ್ಲಿ “ಭಾರತದಲ್ಲಿ ರಾಷ್ಟ್ರೀಯ ಉತ್ಪನ್ನ’ ಎಂಬ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿಯನ್ನು ಪಡೆದು ಅಮೇರಿಕಾದಿಂದ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ತೆರಳಿದರು. ಕೊಲ್ಲಾಪುರದ ಸಾಹೋ ಮಹಾರಾಜರ ಸಹಕಾರದಿಂದ ಲಂಡನ್ನಿನಲ್ಲಿ ಬ್ರಿಟಿಷ್ ಭಾರತದಲ್ಲಿ ಸಾಮ್ರಾಜ್ಯಶಾಹಿಯ ಹಣಕಾಸಿನ ಪ್ರಾಂತೀಯ ವಿಕೇಂದ್ರೀಕರಣ’ ಎಂಬ ಪ್ರಬಂಧ ಮಂಡಿಸಿ ಎಂ.ಎಸ್.ಸಿ ಪದವಿ ಪಡೆಯುತ್ತಾರೆ.

ಆರ್ಥಿಕ ಕಡು ಬಡತನದಿಂದ ವ್ಯಾಸಂಗವನ್ನು ನಿಲ್ಲಿಸಿ ಭಾರತದಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿ, ‘ಬಹಿಷ್ಕತ ಭಾರತ’ ಎಂಬ ಪತ್ರಿಕೆಯನ್ನು ಪ್ರಾರಂಭಿಸುವುದರ ಜೊತೆಗೆ ಸಾಮಾಜಿಕ ಹೋರಾಟದ ಜೀವನ ಪ್ರಾರಂಭಿಸುತ್ತಾರೆ. ಅಸ್ಪಶ್ಯರಿಗೆ ಕೆರೆಯ ನೀರನ್ನು ಮುಟ್ಟುವ ಹಕ್ಕಿಲ್ಲ ಎಂಬ ಕಾನೂನಿನ ವಿರುದ್ದ 1927ರಲ್ಲಿ ಮಹಾಡದ ಚೌಡರ ಕೆರೆಯ ನೀರನ್ನು ಮುಟ್ಟುವ ಮೂಲಕ ಚಳುವಳಿಯನ್ನು ಪ್ರಾರಂಭಿಸುತ್ತಾರೆ.

1930ರಿಂದ 1932ರವರೆಗೆ ಲಂಡನ್ನಿನಲ್ಲಿ ನಡೆದ ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿ ದಲಿತರಿಗೆ ಪ್ರತ್ಯೇಕ ಮತದಾನದ ಸೌಲಭ್ಯವನ್ನು ಕಲ್ಪಿಸಿಕೊಟ್ಟು, ದಲಿತರೂ ಆಳ್ವಿಕೆ ಮಾಡುವ ಅಧಿಕಾರವನ್ನು ದೊರಕಿಸಿ ಕೊಡುತ್ತಾರೆ. 1936ರಲ್ಲಿ ‘ಇಂಡಿಪೆಂಡೆಂಟ್ ಲೇಬರ್ ಪಾರ್ಟಿ’ ಸ್ಥಾಪಿಸಿ ಚುನಾವಣೆಯ ಮಹತ್ವವನ್ನು ತಿಳಿಸಿ ಕೊಡುವಲ್ಲಿ ಇವರ ಪಾತ್ರ ಮಹತ್ತರವಾದದ್ದು. ದಲಿತರಿಗೆ ಶಿಕ್ಷಣದ ಅವಶ್ಯಕತೆಯನ್ನು ಗಮನಿಸಿ 1946ರಲ್ಲಿ ‘ಪೀಪಲ್ಸ್ ಎಜುಕೇಶನ್ ಇನ್ಸ್ಟಿಟ್ಯೂಷನ್’ ಸ್ಥಾಪಿಸುತ್ತಾರೆ. ಬೋಲಾಪುರದಲ್ಲಿ ದಲಿತ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿದರು. 1947ರಲ್ಲಿ ಭಾರತದ ಮೊದಲ ಕಾನೂನು ಮಂತ್ರಿಯಾಗಿ ನೇಮಕರಾದರು. ಭಾರತ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ, ಭಾರತ ದೇಶದ ಅಸ್ಪಶ್ಯರಿಗೆ ಸಮಾನತೆ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟ ದೇವರು ಬಾಬಾ ಸಾಹೇಬ್ ಅಂಬೇಡ್ಕರ್. ಜಗತ್ತಿನಲ್ಲಿಯೇ ಅತಿ ಹೆಚ್ಚು ವಿದ್ಯಾಭ್ಯಾಸ ಮಾಡಿದ ಏಕೈಕ ಭಾರತೀಯ ಎಂದರೆ
ಅದು ನಮ್ಮ ಅಂಬೇಡ್ಕರ್. ಬೆಳಕಿನ ಹಾದಿ ತೋರಿಸಿದ ಸೂರ್ಯನಿಗೆ ಕೋಟಿ ಕೋಟಿ ನಮಸ್ಕಾರ.